Wednesday, December 10, 2008

ಮತ್ತೇ ಶಾಲೆಗೆ ಮರಳುವಾಸೆ....


ಕೈ ಐದು ಬೆರಳುಗಳಿಗೆ 5 ಸೊಂಡಿಗೆಗಳನ್ನು ಸಿಕ್ಕಿಸಿಕೊಂಡು ನಿಧಾನಕ್ಕೆ ತಿನ್ನುವಾಸೆ, ಮನೆಯಲ್ಲಿ ಒಣ ಮೀನು ತಂದಾಗ ಅದರಲ್ಲಿ ಒಂದನ್ನು ಕದ್ದು ಪಾಟಿ ಚೀಲದಲ್ಲಿಟ್ಟುಕೊಂಡು ಶಾಲೆಯ ಕೊಠಡಿಯನ್ನು ನಾಥವಾಗಿಸಿದ ನೆನಪು, ಅಪ್ಪ ಎಂಟಾಣೆ ಕೊಟ್ಟಾಗ ಅದಕ್ಕೆ ಬಂದ ಒಂದು ಬೊಗಸೆ ಬಟಾಣಿಯನ್ನು ಒಂದೊಂದಾಗಿ ತಿನ್ನುತ್ತಾ ದಿನಾಪೂರ್ತಿ ಕಳೆದು ಮನೆಗೆ ಮರಳುವಾಗ ಮತ್ತೊಂದಾದರು ಬಟಾಣಿ ಸಕ್ಕೀತೆ ಎಂದು ಬೊಕ್ಕಣವನ್ನು ತಡಕಾಡಿದ್ದು, ಬರೀ ಸಿಪ್ಪೆ ಸಿಕ್ಕಾಗ ಅದನ್ನೂ ತಿಂದದ್ದು.
ಯಾರಿಗೂ ಕೇರ್ ಮಾಡದೆ ಮೂಗನ್ನು ಎರಡು ತೋಳುಗಳಿಗೆ ಒರಸಿಕೊಂಡು, ಕೈಯನ್ನು ಸ್ಟೈಲಾಗಿ ಜೇಬ್ನಲ್ಲಿಟ್ಟುಕೊಂಡು ಮನೆಗೆ ಬಂದಾಗ ಅಮ್ಮನ ಕಣ್ಣಿಗೆ ಬೀಳದೆ ಬಟ್ಟೆ ಬದಲಾಯಿಸಿ ಆಟವಾಡಲು ಓಡಿದ್ದು, ಮಾರನೆ ದಿನ ಬಟ್ಟೆ ಗಲೀಜಾಗಿದೆ ಎಂದು ನೆವ ಹೇಳಿ ಶಾಲೆಗೆ ಚಕ್ಕರ್ ಹಾಕಲು ಹೊಂಚು ಹಾಕಿ ಸಿಕ್ಕಿ ಹಾಕಿಕೊಂಡಿದ್ದು.
ಮತ್ತೇ ಶಾಲೆಗೆ ಮರಳುವಾಸೆ....
ಅಮ್ಮನ ಮೇಲೆ ಕಂಪ್ಲೇಟ್ ಹೇಳಿ ಅಪ್ಪನ ಮಗನಾಗಿದ್ದು, ಅಪ್ಪನ ಮೇಲೆ ಕಂಪ್ಲೇಟ್ ಹೇಳಿ ಅಮ್ಮನ ಮುದ್ದಿನ ಮಗನಾಗಿದ್ದು. ಗುಮ್ಮನಿಗೆ ಹೆದರಿ ಬೇಗ ಮಲಗಿದ್ದು, ಚಂದ ಮಾಮನ ನೋಡಿ ಹೊಟ್ಟೆ ಬಿರಿಯುವಂತೆ ತಿಂದದ್ದು, ತಲೆಗೆ ಎಣ್ಣೆ ಹಚ್ಚಿಲ್ಲವೆಂದರೆ ಕಣ್ಣು ಉರಿಯುತ್ತವೆ, ಕೂದಲು ಉದುರುತ್ತವೆ ಎಂದು ಅಜ್ಜಿ ಹೇಳಿ ತಲೆಗೆ ಎಣ್ಣೆ ಹಚ್ಚುವ ಬದಲು ತಲೆಯ ಮೇಲೆ ಸುರಿದದ್ದು, ಮುಖದ ಮೇಲೆ ಬೆವರಿಗಿಂತ ಹೆಚ್ಚಾಗಿ ಎಣ್ಣೆ ಹರಿದಾಡಿದ್ದು.
ಮತ್ತೇ ಶಾಲೆಗೆ ಮರಳುವಾಸೆ.......
ಜಡಿ

No comments: