Monday, May 11, 2009

ರಾಮಾಂಜಿನೇಯ ಕಥೆ ನೆಡೆದದ್ದು ನಮ್ಮೂರಲ್ಲಿ ಗೊತ್ತಾ...!


ಹಂಪಿಯಿಂದ ಕೇವಲ ಮೂರ್ನಾಲ್ಕು ಕಿ.ಮೀ ದೂರದಲ್ಲಿರುವ ನಮ್ಮೂರು ಬಸವನದುರ್ಗ, ಹಂಪಿಯ ಸಾಲುಗುಡ್ಡಗಳ ತುದಿಗಂಟಿಕೊಂಡಂತಿರುವ ನಮ್ಮೂರಿನಲ್ಲಿ ಹತ್ತು ಹಲವು ಕಥೆಗಳಿವೆ. ಬಾಲ್ಯದಲ್ಲಿ ಅಜ್ಜಿ ಕಥೆ ಕೇಳಿ ಪುಳಕಿತರಾಗುತ್ತಿದ್ದ ನಮ್ಮ ಗುಂಪಿನಲ್ಲಿ ರಾಮಾಂಜಿನೇಯ ಎಂಬ ಹುಡಗನಿದ್ದ. ಒಂದು ರೀತಿಯಲ್ಲಿ ನಮ್ಮದು ಪಕ್ಕಾ ಕಪಿಸೈನ್ಯಾ.
ನೋಡಲು ಆ ದೇವರಷ್ಟೇ ಗಟ್ಟಿಮುಟ್ಟಾಗಿದ್ದ ಆ ಹುಡಗನಿಗೆ ಸ್ವಲ್ಪ ಕುಸ್ತಿಯ ಹುಚ್ಚು. ಈಗಲು ನಾನು ಮರೆಯಲಾರದ ಕೊಡಗೆಯನ್ನು ಆತ ನನ್ನ ಎರಡನೆ ತರಗತಿಯಲ್ಲಿಯೇ ನೀಡಿದ್ದಾನೆ, ಒಂದು ರೀತಿಯಲ್ಲಿ ಅದು ಎಂದು ಮರೆಯದ ಮತ್ತು ಸದಾ ನನ್ನೊಳಗೆ ಉಳಿದುಕೊಂಡಿರುವ ನೆನಪು ಮತ್ತು ಗುರುತು.
ನಮ್ಮೂರಲ್ಲಿ ಇದ್ದದ್ದು ಒಂದು ಶಾಲೆ ಮತ್ತು ಒಬ್ಬರೇ ಮೇಷ್ಟ್ರು ಆದರೆ ಒಂದರಿಂದ ನಾಲ್ಕನೇ ತರಗತಿಯವರೆಗಿನ ಕ್ಲಾಸ್ಗಳು. ಒಂದು ಮತ್ತು ಎರಡನೇ ತರಗತಿಯವರು ಹೊರಗಡೆಯ ಹೊರಾಂಗಣದಲ್ಲಿ ಕೂತರೆ ಮೂರು ಮತ್ತು ನಾಲ್ಕನೇ ತರಗತಿಯವರು ಒಳಗಡೆ ಕೂರುತ್ತಿದ್ದರು. ತೀರಾ ಚಿಕ್ಕವರು ಮೇಷ್ಟ್ರು ದ್ವನಿಗೆ ಬೆದರಿದರೆ ದೊಡ್ಡವರು ಅವರ ದೇಹಕ್ಕೆ ಬೆದರುತ್ತಿದ್ದ ಕಾರಣ ಅವರು ಓಳಗಡೆ ಕೂಡುತ್ತಿದ್ದರು.
ಹೀಗಿದ್ದ ನಮ್ಮ ಶಾಲೆಯಲ್ಲಿ ಚೇಷ್ಟೆ ಮತ್ತು ಕುಚೇಷ್ಟೆಗಳಿಗೆ ಪ್ರಖ್ಯಾತವಾಗಿದ್ದ ನಮ್ಮ ಗುಂಪು ಒಂದು ರೀತಿಯಲ್ಲಿ ಮೇಷ್ಟ್ರ ಮೊಸ್ಟ್ ವಾಂಟೆಂಡ್ ಲೀಸ್ಟ್ನಲ್ಲಿತ್ತು. ಯಾರೇ ಮಾತಾಡಲಿ ಒಳಗಡೆಯಿಂದ ಜಡಿ.. ಎಂದು ಕೂಗಿದೊಡನೆ ಎಲ್ಲರು ಸುಮ್ಮನಾಗಿಬಿಡುತ್ತಿದ್ದರು. ಅದು ಹೆಸರಿಗಿರುವ ಇನ್ನೊಂದು ಅರ್ಥವನ್ನು ಸಹಾ ಒಳಗೊಂಡಿರುತ್ತಿತ್ತು.
ನೆನಪಾದಗೊಮ್ಮೆ ನಾವು ಹೊರಗಡೆ ಕುಳಿತ್ತಿದ್ದೇವೆ ಎಂಬ ಅರಿವಾದಗಲೆಲ್ಲಾ ಹೊರಗಡೆ ಬಂದು ಒಂದರಿಂದ ಹತ್ತರತನಕ ಮಗ್ಗಿ ಬರೆಯಬೇಕು ಮತ್ತು ಕಂಠಪಾಟ ಮಾಡಿ ಸಂಜೆ ಕೇಳಿದಾಗ ಒಪ್ಪಿಸಬೇಕು ಎನ್ನುವ ಆಜ್ಞೆಯನ್ನು ಹೊರಡಿಸಿ ಮತ್ತೇ ಒಳಗಡೆ ಕೂರುತ್ತಿದ್ದ ಮೇಷ್ಟ್ರು ಮುಖ ತೊರಿಸುತ್ತಿದ್ದದ್ದು ಮುಂಜಾನೆಯ ಜನ ಗಣ ಮನ... ದಲ್ಲಿ ಮತ್ತು ಸಂಜೆಯ ಜೈ ಭಾರತ ಜನನಿಯ ತನುಜಾತೆಯಲ್ಲಿ ಮಾತ್ರ.
ಹೀಗಿದ್ದ ನಮ್ಮ ಒಂದೇರಡು ಕ್ಲಾಸ್ನ್ನು ಬಿಟ್ಟು ಮೂರನೇ ತರಗತಿ ಬರುದುವುದೇ ಬೇಡ ಎಂಬಲ್ಲಿಗೆ ನಮ್ಮ ಹರಕೆ ಬೆಳದಿತ್ತು.
ನಾನು ಒಂದನೇ ಕ್ಲಾಸ್ ಪಾಸಾಗಿದ್ದಕ್ಕೆ ಅಪ್ಪ ಖುಷಿಯಾಗಿ ಕಲರ್ ಕಲರಾಗಿದ್ದ ಬ್ಯಾಗೊಂದನ್ನು ಕೊಡಿಸಿದ್ದರು. ಅದರ ಪ್ರತಿ ದಾರವು ಕಲರ್ಗಳಿಂದ ಕೂಡಿತ್ತು. ಶಾಲೆಯಲ್ಲಿ ಒಂದು ರೀತಿಯಲ್ಲಿ ನನ್ನ ಗೌರವವನ್ನು ಹೆಚ್ಚಿಸಿದ್ದರು ನನ್ನಪ್ಪ. ಎಲ್ಲರ ಕಣ್ಣು ನನ್ನ ಬ್ಯಾಗಿದ ಮ್ಯಾಲಿತ್ತು.
ದಡೂತಿ ರಾಮ ಅದರ ದಾರಗಳನ್ನು ಒಂದೊಂದಾಗಿ ಎಳೆಯತೊಡಗಿದ್ದ, ಅದು ಪ್ಲಾಸ್ಟಿಕ್ನಿಂದ ಮಾಡಿದ್ದಾಗಿದ್ದರಿಂದ ಅದನ್ನು ಇಂಚಿಂಚಾಗಿ ಅಗೆಯುತ್ತಾ ಅದರ ರಸವತ್ತತೆಯನ್ನು ಅನುಭವಿಸಿ ಕೊನೆಗೊಮ್ಮೆ ಉಗಿದುಬಿಡುತ್ತಿದ್ದ, ಒಂದು ದಿನ ನಂಗೆ ಸಿಟ್ಟು ಬಂದು ಯಾಕೊ ನನ್ನ ಬ್ಯಾಗ್ ಹಾಳ್ ಮಾಡ್ತಿಯಾ ಅಂದದಕ್ಕೆ ನನ್ನ ಸಿಟ್ಟು ಮರೆಸಲು ಆ ದಾರವನ್ನು ನನ್ನ ಕಿವಿವೊಲೆ ಚುಚ್ಚಿ ಪಮೇಂಟಾಗಿ ತೂತಾಗಿದ್ದ ಜಾಗದಲ್ಲಿ ಅದನ್ನು ಎಣೆದು ಚೆಂದಾದ ಮತ್ತು ಕಲರ್ಫುಲ್ಲಾದ ಕಿವಿ ಓಲೆ ಮಾಡಿ ಎಲ್ಲಾರಿಗೂ ತೋರಿಸಿ ಎಷ್ಟು ಚೆಂದ ಕಾಣಿಸ್ತೀಯ ಎಂದು ನನ್ನನ್ನು ಹಿರಿಹಿರಿ ಹಿಗ್ಗಿಸಿದ್ದ.
ಸಂಜೆ ಶಾಲೆ ಬಿಡುವ ಸಮಯವಾಗಿತ್ತು, ಇನ್ನೇನು ಬೆಲ್ ಹೊಡೆದರೆ ನಾವೆಲ್ಲಾ ಲೈನಾಗಿ ನಿಂತು ಜೈ ಭಾರತ ಜನನಿಯ ತನುಜಾತೆ ಹಾಡಿ ಮನೆಗೋಡಲಿಕ್ಕೆ ತಯಾರಿ ನೆಡೆಸಿದ್ದೆವು. ಅಷ್ಟರಲ್ಲಿ ರಾಮಾಂಜಿನಿ ಕಟ್ಟಿದ್ದ ದಾರ ನೆನಪಾಗಿ ಅದನ್ನು ಬಿಚ್ಚಲು ಹೇಳಿದೆ, ಅವ ಹದಿನೆಂಟು ಗಂಟುಗಳನ್ನಾಕಿದ್ದ ಕಾರಣ ಅದು ಅಷ್ಟು ಸಲಿಸಾದ ಕೆಲಸವಾಗಿರಲಿಲ್ಲ. ನಿಧಾನಕ್ಕೆ ಬಿಚ್ಚುತ್ತಿದ್ದ. ಬೆಲ್ ಹೊಡೆದುಬಿಟ್ಟಿತು. ಎಲ್ಲಾರು ಓಡತೊಡಗಿದ್ದರು. ಅವಸರದಲ್ಲಿದ್ದ ನಾನು ಅವನಿಗೆ ' ಎಳೆದರೆ ದಾರ ಹರಿದು ಹೋಗುತ್ತದೆ' ಎಂಬ ಐಡಿಯಾ ಕೊಟ್ಟಿದ್ದೇ ತಡ ಅವನು ಮರು ಮಾತಾಡದೆ ಎಳೆದ.. ದುಂಡಗೆ ಕಟ್ಟಿದ್ದ ದಾರ ಹಾಗೆಯೇ ಅವನ ಕೈಯಲ್ಲಿತ್ತು. ಕಿವಿ ಓಲೆಯ ಜಾಗ ಹರಿದು ಎರಡಾಗಿತ್ತು.
ಕಥೆ ಮುಂದುವರೆಯುತ್ತೇ.ಕಾರಣ ಇದು ಮಹಾಕಾವ್ಯ ರಾಮಾಂಜೆನೇಯ ಚರಿತಾ..

No comments: